ಬೈತಿಡುವಿಕೆ -
	ಉದ್ದೇಶಪೂರ್ವಕವಾಗಿ ಧಾನ್ಯಗಳನ್ನು ಮತ್ತು ಸಾರ್ವಜನಿಕ ಉಪಯೋಗಿ ಅಗತ್ಯ ವಸ್ತುಗಳನ್ನು ಹಾಗೂ ಹಣವನ್ನು ಸ್ವಲಾಭಕ್ಕಾಗಿ ಅಪಾರವಾಗಿ ಸಂಗ್ರಹಿಸಿ ಬಚ್ಚಿಡುವುದು (ಹೋರ್ಡಿಂಗ್). ಸಮಾಜವಿರೋಧಿಯಾದ ಈ ಕಾರ್ಯವನ್ನು ಜನ ದುರಾಸೆಯಿಂದ ಮಾಡುವುದುಂಟು. ಇದಲ್ಲದೆ ಕಾನೂನುಬದ್ಧವಾಗಿ ಮತ್ತು ಬಹಿರಂಗವಾಗಿ, ಮಿತಿಯೊಳಗೆ ಭವಿಷ್ಯದ ಉಪಯೋಗಕ್ಕಾಗಿ ಕೂಡಿಡುವುದು ಅಥವಾ ಸಂಗ್ರಹಿಸಿ ಇಡುವುದುಂಟು. ಈ ಬಗೆಯ ಸಂಗ್ರಹದ ಉದ್ದೇಶ ಬಚ್ಚಿಡುವ ಉದ್ದೇಶಕ್ಕಿಂತ ಬೇರೆಯಾದದ್ದು. ಇದರಲ್ಲಿ ದ್ರೋಹ ಚಿಂತನೆಯಾಗಲಿ, ಸ್ವಲಾಭದ ದುರಾಸೆಯಾಗಲಿ ಇರುವುದಿಲ್ಲ. ಯುದ್ಧಕಾಲದಲ್ಲಿ ಅಥವಾ ದೇಶದಲ್ಲಿ ಕ್ಷಾಮಪರಿಸ್ಥಿತಿ ಇದ್ದಾಗ ಹಾಗೂ ಅಧಿಕ ಬೇಡಿಕೆ ಇರುವಾಗ ಕೆಲವು ವರ್ತಕರು ಸರಕುಗಳನ್ನು ಮುಂದೆ ಕಾಳ ಸಂತೆಯಲ್ಲಿ ಮಾರಿ ವಿಶೇಷ ಲಾಭ ಸಂಪಾದಿಸಲು ಬಚ್ಚಿಡುವುದುಂಟು. ಇದು ಆಧುನಿಕ ವರ್ತಕ ವ್ಯವಹಾರದ ಒಂದು ಕೆಟ್ಟ ಬೆಳೆವಣಿಗೆ.

	ಭವಿಷ್ಯದ ಉಪಯೋಗಕ್ಕೆ ಧನಧಾನ್ಯವನ್ನು ಕೂಡಿಡುವುದು ಪ್ರಾಚೀನ ಕಾಲದಿಂದ ಬೆಳೆದು ಬಂದಿರುವ ವಾಡಿಕೆ. ಇದಕ್ಕೂ ಆಧುನಿಕ ರೀತಿಯ ಉಳಿತಾಯಕ್ಕೂ ಬಹಳ ವ್ಯತ್ಯಾಸವಿದೆ. ಕೂಡಿಟ್ಟವರು ತಾವು ಕೂಡಿಟ್ಟ ಧನವನ್ನು ಬಂಡವಾಳವಾಗಿ ನಿಯೋಜಿಸಿ ಅದರಿಂದ ಉತ್ಪತ್ತಿ ಪಡೆಯಲು ಪ್ರಯತ್ನಿಸುವುದಿಲ್ಲ. ಆದರೆ ಆಧುನಿಕ ರೀತಿಯ ಉಳಿತಾಯವನ್ನು ಬಂಡವಾಳವಾಗಿ ಹೂಡಿ ಅದರಿಂದ ಉತ್ಪತ್ತಿ ಪಡೆಯಲು ಉಳಿತಾಯ ಮಾಡಿದವರು ಪ್ರಯತ್ನಿಸುತ್ತಾರೆ. ಆದುದರಿಂದ ಇಲ್ಲಿ ಧನ ಅಥವಾ ಐಶ್ವರ್ಯದ ಉಪಯೋಗವಿದೆ. ಕೂಡಿಟ್ಟ ಧನವನ್ನು ಬಂಡವಾಳವಾಗಿ ನಿಯೋಜಿಸುವ ವಾಡಿಕೆಯಿಲ್ಲದಿರುವುದರಿಂದ ಅಲ್ಲಿ ಅದರ ಉಪಯೋಗವಾಗದೆ ಅಷ್ಟು ಬಂಡವಾಳ ಸ್ಥಗಿತವಾಗುತ್ತದೆ, ಅಷ್ಟು ಬಂಡವಾಳವನ್ನು ಪ್ರಚಲಿತ ಉಪಯೋಗದಿಂದ ಹಾಗೂ ಚಲಾವಣೆಯಿಂದ ತಡೆದಂತೆ ಆಗುತ್ತದೆ. ಉಳಿತಾಯಗಾರನಿಗೆ ಆತನ ಉಳಿತಾಯದಿಂದ ಉತ್ಪತ್ತಿ ಮತ್ತು ಲಾಭ ಎರಡೂ ಇವೆ. ಆದರೆ ಕೂಡಿಟ್ಟವನಿಗೆ ಆ ಧನದ ಮೌಲ್ಯದ ಏರುವಿಕೆಯಿಂದಾದ ಹೊರತು ಯಾವ ವಿಧವಾದ ಉತ್ಪತ್ತಿಯಾಗಲಿ ಲಾಭವಾಗಲಿ ಇಲ್ಲ. ಅದರ ಜೊತೆಗೆ ಈತನಿಗೆ ಕಳ್ಳಕಾಕರಿಂದ, ಅಗ್ನಿಯಿಂದ, ಜಲಪ್ರಳಯದಿಂದ ಅಥವಾ ಭೂಕಂಪನದಿಂದ ನಷ್ಟವಾಗುವ ಸಂಭವವಿದೆ. ಆದರೆ ದೇಶೀಯ ನಾಣ್ಯದ ಅಪಮೌಲ್ಯದಿಂದಾಗಲಿ ಹಣದುಬ್ಬರದಿಂದಾಗಲಿ ಈತನ ವ್ಯಾಪಾರಕ್ಕೆ ಧಕ್ಕೆ ತಗುಲುವುದಿಲ್ಲ. ಆದ್ದರಿಂದ ಯುದ್ಧಭಯ, ದೇಶದಲ್ಲಿ ಅಶಾಂತ ಪರಿಸ್ಥಿತಿ ಮತ್ತು ಹಣದುಬ್ಬರದ ನಷ್ಟ ಸಂಭವಿಸಬಹುದಾದಲ್ಲಿ ಕೂಡಿಟ್ಟವನಿಗೂ ದೇಶದಲ್ಲಿ ಶಾಂತ ಪರಿಸ್ಥಿತಿ ಇರುವಲ್ಲಿ ಉಳಿತಾಯ ಮಾಡಿದವನಿಗೂ ಪ್ರಯೋಜನವಾಗುವುದೆಂದು ಹೇಳಬಹುದು.

	ವಿಶೇಷವಾಗಿ ಬಾಳಿಕೆ ಬರುವ ಮತ್ತು ವಿಶಿಷ್ಟವಾದ, ಬಹುಪದಾರ್ಥಗಳನ್ನು ಕೂಡಿಡುವ ವಾಡಿಕೆ ಎಲ್ಲರಲ್ಲೂ ಇದೆ. ಅಮೂಲ್ಯವಾದ ಚಿನ್ನ, ಬೆಳ್ಳಿ, ಮುಂತಾದ ಲೋಹಗಳ, ವಜ್ರ, ವೈಡೂರ್ಯ ಮುಂತಾದವನ್ನೂ ಪ್ರಶಸ್ತವಾದ ವರ್ಣ ಚಿತ್ರಗಳನ್ನೂ ಬೆಲೆಯುಳ್ಳ ಪುಸ್ತಕ ಮುಂತಾದವುವನ್ನೂ ಕೂಡಿಡುವ ವಾಡಿಕೆ ಪ್ರಾಚೀನವಾದುದು. ಬಹುಶಃ ಐಶ್ವರ್ಯದ ಹುಟ್ಟು ಎಷ್ಟು ಪ್ರಾಚೀನವೊ ಕೂಡಿಡುವುದೂ. ಬಚ್ಚಿಡುವುದೂ ಅಷ್ಟೇ ಪ್ರಾಚೀನವೆಂದು ಹೇಳಬಹುದು. ಪ್ರಾಚೀನ ಬುಡಕಟ್ಟುಗಳಲ್ಲಿ ಪ್ರದರ್ಶನೀಯ ಆಕಾಂಕ್ಷೆಯಿಂದ ಮತ್ತು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೂಡಿಡುವಿಕೆ ವಾಡಿಕೆಯಲ್ಲಿ ಇತ್ತು ಎಂದು ಕಾಣುತ್ತದೆ. ಈಗಲೂ ಹೆಚ್ಚು ಧನಕನಕಾದಿಗಳನ್ನು ಉಳ್ಳ ಮಂದಿ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಅವನ್ನು ತೊಟ್ಟು ಅಥವಾ ಇತರರ ಮುಂದೆ ಪ್ರದರ್ಶಿಸಿ ಹೆಮ್ಮೆಪಟ್ಟುಕೊಳ್ಳುವುದುಂಟು.

	ಆರ್ಥಿಕ ವಿವೇಚನೆ ಬೆಳೆದುಬಂದಂತೆ ಹಣದ ಉಪಯೋಗ ಬಂದಮೇಲೆ, ಚಿನ್ನ ಬೆಳ್ಳಿ ಮುಂತಾದ ಅಮೂಲ್ಯ ನಾಣ್ಯಗಳನ್ನು ಬೈತಿಡುವುದು ಪ್ರಾರಂಭವಾಯಿತು. ಈಗಲೂ ಕೆಲವು ಕಡೆ ನಾನಾ ಕಾರಣಗಳಿಗೆ ಭೂ ಅಗೆತ ಮಾಡಿದಾಗ ಸಿಕ್ಕುವ ಚಿನ್ನ-ಬೆಳ್ಳಿ ನಾಣ್ಯಗಳು ಸಾಕ್ಷಿಯಾಗಿವೆ. ಕೆಲವು ಸಾಂಪ್ರದಾಯಿಕ ರೂಢಿಗಳಿಂದ ಪುರಾತನ ದೇವಾಲಯಗಳಲ್ಲಿ ಒಡವೆ, ವಸ್ತ್ರ, ಬೆಲೆಯುಳ್ಳ ನಾಣ್ಯ ಮುಂತಾದವನ್ನು ಕೂಡಿಟ್ಟು ಭದ್ರವಾಗಿ ಅವನ್ನು ಉಳಿಸಿಕೊಂಡು ಬರುವುದುಂಟು. ನಮ್ಮ ದೇಶದಲ್ಲಿ ಚಿನ್ನ, ವಜ್ರ, ವೈಡೂರ್ಯ ಮತ್ತು ಅಮೂಲ್ಯ ಲೋಹಗಳನ್ನು ಕೂಡಿಟ್ಟಿರುವುದು ವಿರಳವಲ್ಲ. ಹಿಂದಿನ ರಾಜಮಹಾರಾಜರುಗಳು ವಿಶೇಷ ಮೌಲ್ಯದ ಚಿನ್ನ, ವಜ್ರ, ವೈಢೂರ್ಯಗಳನ್ನೂ ಬಹಳ ಬೆಲೆಯುಳ್ಳ ಒಡವೆಗಳನ್ನೂ ಕೂಡಿಟ್ಟಿರುವ ನಿಧಿಗಳಿವೆ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ಧನಿಕರೂ ದುರಾಸೆಯ ವರ್ತಕರೂ ಧನ ಧಾನ್ಯಗಳನ್ನೂ ಅಗತ್ಯ ವಸ್ತುಗಳನ್ನು ಮಿತಿಮೀರಿ ಸಂಗ್ರಹಿಸಿ ಬಚ್ಚಿಡುವುದು ಕಾನೂನಿಗೆ ವಿರುದ್ಧ ಮತ್ತು ದೇಶದ್ರೋಹವೆಂದು ತಿಳಿದಿದ್ದರೂ ಬಚ್ಚಿಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬ್ಯಾಂಕುಗಳ ಹಿಡಿತವಿದ್ದರೂ ಇಡೀ ಆರ್ಥಿಕ ಕ್ಷೇತ್ರವೇ ಕೆಲವು ವೇಳೆ ಈ ಬಗೆಯ ದ್ರೋಹ ಚಟುವಟಿಕೆಯಿಂದ ಏರು ಪೇರಾಗುವುದುಂಟು.  
   (ಸಿ.ಎಂ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ